ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಫೆಬ್ರವರಿ 21 ರಂದು ವಿಶ್ವ ಮಾತೃ ಭಾಷಾ ದಿನದ ಅಂಗವಾಗಿ ಮಾತೃ ಭಾಷಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಶಶಿಕಾಂತ ಎಸ್ ಶೆಟ್ಟಿ ತಮ್ಮ ದಿಕ್ಸೂಚಿ ಭಾಷಣದಲ್ಲಿ ಭಾಷೆ ಮತ್ತು ಇತಿಹಾಸ, ಭಾಷೆ ಮತ್ತು ಪರಂಪರೆ, ಭಾಷೆ ಮತ್ತು ಆಚರಣೆಯ ನಡುವಿನ ನಂಟನ್ನು ವಿವರಿಸಿದರು, ಕರಾವಳಿ ಕರ್ನಾಟಕದ ತುಳು, ಕೊಂಕಣಿ, ಕುಂದಾಪ್ರ ಕನ್ನಡ, ಬ್ಯಾರಿ ಹೀಗೆ ವೈವಿಧ್ಯ ಭಾಷೆಯ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಹೇಳುತ್ತಾ, ಯಾವಾಗ ನಾವು ಮಾತೃ ಭಾಷೆಯನ್ನು ಮಾತನಾಡಲು ಮರೆಯುತ್ತೇವೆಯೋ ಅಂದು ನಮ್ಮ ಸಂಸ್ಕೃತಿಯ ಕೊಂಡಿ ಕಳಚುತ್ತದೆ, ಅದಕ್ಕಾಗಿ ಮಾನವೀಯತೆಯಿಂದ, ಹೊಂದಾಣಿಕೆಯಿಂದ ಸರ್ವರೂ ಬರವಣಿಗೆಯಲ್ಲಿ ತೊಡಗಿ ಸಂಸ್ಕೃತಿಯನ್ನು ಕಟ್ಟಲು ಪ್ರಯತ್ನಿಸಬೇಕು ಎಂದು ಕರೆಕೊಟ್ಟರು.
ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ತುಳು ನನ್ನ ಮಾತೃ ಭಾಷೆ ಎಂದು ತಿಳಿಸಿ ತುಳುವಿನ ವೈವಿಧ್ಯತೆಯನ್ನು ವಿವರಿಸಿದರು.
ಸಾಹಿತ್ಯ ಸಂಘ ಸಂಚಾಲಕ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಪ್ರಾಸ್ತಾವಿಕ ನುಡಿಯನ್ನು ಹೇಳಿ ಮಾತೃ ಭಾಷೆ ಕುಂದ ಕನ್ನಡದ ಬಗ್ಗೆ ಮಾಹಿತಿ ನೀಡಿದರು.
ಅಂತಿಮ ಬಿಬಿಎ ವಿದ್ಯಾರ್ಥಿ ಗಿರೀಶ್ ಕಾಮತ್ ಮಾತೃ ಭಾಷೆ ಕೊಂಕಣಿಯಲ್ಲಿ ಸರ್ವರನ್ನು ಸ್ವಾಗತಿಸಿದರು, ದ್ವಿತೀಯ ಬಿಬಿಎ ಚೇತನ್ ರಾಮಚಂದ್ರ ಭಟ್ ಹವ್ಯಕ ಕನ್ನಡದಲ್ಲಿ ವಂದಿಸಿದರು, ದ್ವಿತೀಯ ಬಿಬಿಎ ಸನ್ನಿಧಿ ಶೆಟ್ಟಿ ತುಳು ಭಾಷೆಯಲ್ಲಿ ಕಾರ್ಯಕ್ರಮ ನಿರೂಪಿಸಿದರು.