ಇಂದಿನ ಶಿಕ್ಷಣ ಮತ್ತು ಶಿಕ್ಷಿತರೇ ಅನಾಗರೀಕರಂತೆ ಇದ್ದು ಶಿಕ್ಷಣ ವಂಚಿತರೆ ಸುಸಂಸ್ಕೃತ ಜೀವನ ನಡೆಸುತ್ತಿದ್ದಾರೆ, ಈಗಿನ ಶಿಕ್ಷಣ ನಿಸ್ವಾರ್ಥತೆ, ಸೌಹಾರ್ದತೆ, ಸಂಸ್ಕಾರ, ಮಾನವೀಯತೆ, ಸೇವಾ ಮನೋಭಾವನೆ, ತಾಳ್ಮೆ, ಸಹಿಷ್ಣುತೆ, ತ್ಯಾಗ ಇವೇ ಮೊದಲಾದ ಸದ್ಗುಣಗಳನ್ನು ಬೆಳೆಸುವಂತಾಗಬೇಕು ಒಬ್ಬ ಸುಶೀಕ್ಷಿತನಾದರೆ ತನ್ನ ಸಾಮಾಜಿಕ ಋಣ ತೀರಿಸಲು ಸಂಪಾದನೆಯ ಒಂದಂಶ ಮೀಸಲಿಡಬೇಕು ಹೀಗೆ ಸಂಸ್ಕಾರಯುತ ಬದುಕಿನ ಪದವಿ ಪಡೆದು ಆಡಂಬರದ ಬದುಕು ಬದುಕಲ್ಲ ಸರಳತೆಯಿಂದ ಜೀವನ ನಡೆಸಿ ಸಮಾಜಕ್ಕೆ ಉಪಕಾರಿಯಾಗುವವನೇ ರಿಯಲ್ ಹೀರೋ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀ ವಿಶು ಶೆಟ್ಟಿ ಅಂಬಲಪಾಡಿ ನುಡಿದರು.
ಅವರು ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ 2024-25 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ರಿಯಲ್ ಹೀರೋ ಎಂಬ ವಿನೂತನ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ಯುವ ಪೀಳಿಗೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಖೇದನೀಯ, ಯುವಕರು ಸಾಂತ್ವಾನ ಕೇಂದ್ರಗಳಲ್ಲಿ, ಮಾನಸಿಕ ಖಿನ್ನತೆಗೆ ಒಳಗಾಗಿ ಆಸ್ಪತ್ರೆಗಳಲ್ಲಿ ಕಾಣಸಿಗುವುದು ನೋಡಿದರೆ ಭವಿಷ್ಯದ ಯುವ ಜನತೆ ಎತ್ತ ಕಡೆ ಸಾಗುತ್ತಲಿದೆ ಎಂಬ ಆತಂಕ ಸೃಷ್ಟಿಯಾಗಿದೆ, ಅದಕ್ಕಾಗಿ ಇಂತಹ ಎನ್ ಎಸ್ ಎಸ್ ಘಟಕಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ವೇದಿಕೆ ಹಾಗೇಯೇ ತಂದೆ ತಾಯಿಗೆ ಒಳ್ಳೆಯ ಮಗ,ಮಗಳಾಗಿ ಸಮಾಜಕ್ಕೆ ಒಂದೊಳ್ಳೆ ಪ್ರಜೆಯಾಗಿ ಸಹಕಾರ, ಸಹಬಾಳ್ವೆ ಮತ್ತು ಸರಳ ಜೀವನ ನಡೆಸಬೇಕೆಂದು ಕರೆಯಿತ್ತರು.
ಈ ಸಂದರ್ಭದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಪ್ರೇಮ್ ಸಾಯಿ ಸಿದ್ಧಪಡಿಸಿದ್ದ ವಿಶು ಶೆಟ್ಟಿ ಯವರ ಸಾಮಾಜಿಕ ಜೀವನದ ಸಾಕ್ಷ್ಯ ಚಿತ್ರ ಪ್ರದರ್ಶಿಸಲ್ಪಟ್ಟಿತು.
ಕಾಲೇಜಿನ ವತಿಯಿಂದ ಸಾಮಾಜಿಕ ಕಾರ್ಯಕರ್ತ ರಿಯಲ್ ಹೀರೋ ಶ್ರೀ ವಿಶು ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಪ್ರಸ್ತುತ ವರ್ಷದ ಎನ್. ಎಸ್. ಎಸ್ ಘಟಕದ ವಿದ್ಯಾರ್ಥಿ ಪ್ರತಿನಿಧಿಗಳಾಗಿ ಆಯ್ಕೆಯಾದ ಬಿ.ಕಾಮ್ ಮತ್ತು ಬಿ ಬಿ ಎ ವಿದ್ಯಾರ್ಥಿಗಳಾದ ವಿನಾಯಕ್, ಪ್ರತೀಶ್, ಶುಭನ್, ನಿಹಾರ್, ಕೃತಿಕಾ, ಸಿಂಚನಾ, ವೀಕ್ಷಿತಾ, ಭೂಮಿಕಾ ಇವರಿಗೆ ಪುಷ್ಪನೀಡಿ ಅಭಿನಂದಿಸಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರೀ ರಾಜೇಶ್ ಕುಮಾರ್ ಪ್ರಸ್ತಾವನೆಯ ಮೂಲಕ ಸ್ವಾಗತಿಸಿದರು, ಸಹ ಯೋಜನಾಧಿಕಾರಿ ಶ್ರೀ ಚಂದ್ರಶೇಖರ್ ವಂದಿಸಿದರು. ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿಸಿದರು.