ಶತ್ರುಗಳು ಯಾವ ಸಂದರ್ಭದಲ್ಲಿ ಯಾವ ಮೂಲೆಯಿಂದಾದರೂ ಆಕ್ರಮಿಸಬಹುದು. ಅದನ್ನು ಸಮರ್ಥವಾಗಿ ತಡೆಗಟ್ಟಿ ನಿರ್ಭಯ ರಾಜಕೀಯವನ್ನು ನಡೆಸಬೇಕಾದುದು ರಾಜನ ಕರ್ತವ್ಯ. ಈ ನಿಟ್ಟಿನಲ್ಲಿ ಚೆಸ್ ಕ್ರೀಡೆಯು ಬದುಕಿಗೆ ತೀರ ಹತ್ತಿರವಾಗಿದೆ ಎಂದು ಅಂಬಲ್ಪಾಡಿಯ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಯಾದ ಡಾ. ಎನ್.ವಿಜಯ ಬಲ್ಲಾಳ್ ಹೇಳಿದರು.
ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸೆಪ್ಟಂಬರ್ ೩ ರಿಂದ ೫ ರವರೆಗೆ ನಡೆಯಲಿರುವ ಮಂಗಳೂರು ವಿಶ್ವವಿದ್ಯಾಲಯ ಅಂತರ್ಕಾಲೇಜು ಪುರುಷರ ಮತ್ತು ಮಹಿಳೆಯರ ಚೆಸ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾನಸಿಕ ಕಸರತ್ತೇ, ಪ್ರಧಾನವಾಗಿರುವ ಚೆಸ್ ಕ್ರೀಡೆಯಲ್ಲಿ ಮನಸ್ಸಿನ ಸ್ಥಿರತೆಗೆ ಆರೋಗ್ಯ ಪೂರ್ಣ ಶಾರೀರಿಕ ದೃಢತೆ ಬೇಕು. ಜಯ, ಅಪಜಯ ಕ್ರೀಡೆಗಳಲ್ಲಿ ಸಾಮಾನ್ಯವಾಗಿದ್ದು ಸೋಲನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗಿದಾಗ ಎಂತಹ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಬಹುದು. ಈ ನಿಟ್ಟಿನಲ್ಲಿ ಬುದ್ಧಿ ಕೌಶಲದ ಚೆಸ್ ಕ್ರೀಡೆ ಭವಿಷ್ಯದ ಕಾರ್ಯಕ್ಷೇತ್ರಗಳಲ್ಲಿ ಧೈರ್ಯದಿಂದ ಮುನ್ನುಗ್ಗುವ ಪ್ರಯತ್ನಕ್ಕೆ ನಾಂದಿಯಾಗಲಿ ಎಂದು ಹಾರೈಸಿದರು.
ಉಡುಪಿ ಮಂಗಳೂರು ಸಹಕಾರಿ ಮೀನುಗಾರಿಕಾ ಫೆಡರೇಶನ್ ಇದರ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ, ಸೈಂಟ್ ಮೇರಿಸ್, ಶಿರ್ವ ಇಲ್ಲಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೇಣು ಗೋಪಾಲಕೃಷ್ಣ ನೋಂಡಾ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಮಡಿಕೇರಿ ಸೇರಿದಂತೆ ಪುರುಷರ ವಿಭಾಗದಲ್ಲಿ ೨೬ ತಂಡಗಳು, ಮಹಿಳಾ ವಿಬಾಗದಲ್ಲಿ ೧೭ ತಂಡಗಳು ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದವು.
ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಗಣೇಶ್ ಕೋಟ್ಯಾನ್ ಅತಿಥಿಗಳನ್ನು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಚಂದ್ರಶೇಖರ್ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕ ಡಾ|ವಸಂತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.