ಅಕ್ಟೋಬರ್ ೬ ರಿಂದ ೧೦ ರವರೆಗೆ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ದಕ್ಷಿಣ ವಲಯ ಅಂತರ್ವಿಶ್ವವಿದ್ಯಾಲಯ ಚೆಸ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯ ಚೆಸ್ ತಂಡವನ್ನು ಸಮವಸ್ತ್ರ ವಿತರಣೆಯ ಮೂಲಕ ಹೃದಯ ಸ್ವರ್ಶಿಯಾಗಿ ಬೀಳ್ಕೊಡುವ ಸಮಾರಂಭವು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಿತು.
ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ಡಾ|ಕೇಶವ ಮೂರ್ತಿಯವರು ಸುಮಾರು ೯೦,೦೦೦ ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ತೆರಳುತ್ತಿರುವ ಚೆಸ್ ತಂಡಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಚಾರ್ಯ ಡಾ|ಮಧುಸೂದನ ಭಟ್, ವಿ.ವಿ.ಯ ಸಮವಸ್ತ್ರವನ್ನು ವಿತರಿಸಿ ವಿದಾಯ ಮಾತುಗಳನ್ನು ಹೇಳಿದರು.
ಉಡುಪಿ ಮಂಗಳೂರು ಡೆರಿಕ್ ಚೆಸ್ ಸ್ಕೂಲ್‌ನ ನಿರ್ದೇಶಕರಾದ ಶ್ರೀ ಪ್ರಸನ್ನ ರಾವ್, ತಂಡದ ಮ್ಯಾನೇಜರ್ ಆಗಿರುವ ಯು.ಪಿ.ಎಂ.ಸಿ ಯ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಗಣೇಶ್ ಕೋಟ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಡುಪಿ ಯು.ಪಿ.ಎಂ.ಸಿ ಯ ಪ್ರಸನ್ನ ವಿ.ಹೆಗ್ಡೆ, ಪಿ.ಪಿ.ಸಿ. ಯ ನಿತಿನ್ ಎಸ್ ಶೆಟ್ಟಿ, ಪಿ.ಪಿ. ಸಂಧ್ಯಾಕಾಲೇಜಿನ ಸಾಕ್ಷಾತ್ ಯು.ಕೆ., ಎಂ.ಜಿ.ಎಂ. ಕಾಲೇಜಿನ ಗಣಪತಿ ಭಟ್, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸುಶ್ಮಿತಾ ರಾವ್ ಹಾಗೂ ಆಳ್ವಾಸ್ ಕಾಲೇಜು ಮೂಡಬಿದ್ರೆಯ ಆಶಿಕ್ ಡಿ.ಸಿ. ಇವರು ವಿ.ವಿ.ಯ ಚೆಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ವಿ.ಐ.ಟಿ) ಯಲ್ಲಿ ಕಳೆದ ವರ್ಷ ನಡೆದ ದಕ್ಷಿಣ ಭಾರತ ಅಂತರ್ವಿಶ್ವವಿದ್ಯಾಲಯ ಚೆಸ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಐದನೇ ಸ್ಥಾನ ಗಳಿಸಿದ ಸಾಧನೆ ಗಮನಾರ್ಹವಾಗಿದೆ.